ತೀಸೂಸ್
ಗ್ರೀಕ್ ಪೌರಾಣಿಕ ವ್ಯಕ್ತಿ. ಹೆರಕ್ಲೀಸ್‍ನಂತೆ ವೀರ್ಯ ಹಾಗೂ ಪೌರುಷಕ್ಕೆ ಹೆಸರಾದವ. ತಂದೆ ಅತೆನ್ಸಿನ ರಾಜ ಈಜಿಯಸ್. ತಾಯಿ ಟ್ರಾಯ್‍ನ ರಾಜ ಪಿತಿಯಸ್ಸನ ಮಗಳು. ಈತ ಅಟಿಕದ ಏಕೀಕರಣಕ್ಕೆ ಕಾರಣಭೂತನಾದವನೆಂದು ಗ್ರೀಕರ ನಂಬಿಕೆ. ಈತನ ಸಾಹಸ ಕಾರ್ಯಗಳಲ್ಲಿ ಮುಖ್ಯವಾದವು-ಕ್ರೀಟ್ ದ್ವೀಪದಲ್ಲಿದ್ದ ಅರ್ಧಮನುಷ್ಯ ಅರ್ಧಗೊಳಿಯಾಕೃತಿಯ ಮಿನಟಾರ್ ಎಂಬ ರಾಕ್ಷಸನೊಡನೆ ಹೋರಾಟ ನಡೆಸಿದ್ದು ; ಅಮಾನುಷ ಶಕ್ತಿಯುಳ್ಳ ಸ್ತ್ರೀ ಸೈನ್ಯದ ಆಕ್ರಮಣದಿಂದ ಆತೆನ್ಸ್ ನಗರವನ್ನು ರಕ್ಷಿಸಿದ್ದು. ಒಮ್ಮೆ ನರಕದಲ್ಲಿ ಬಂದಿಯಾಗಿದ್ದ ಈತನನ್ನು ಹೆರಕ್ಲೀಸ್ ಬಿಡಿಸಿ ಕಾಪಾಡಿದ. ಕೊನೆಗಾಲದಲ್ಲಿ ಆತೆನ್ಸ್ ನಗರನಿವಾಸಿಗಳೊಡನೆ ಮನಸ್ತಾಪ ಮಾಡಿಕೊಂಡು ಆತೆನ್ಸ್‍ನ್ನು ತೊರೆದು ಬಂದ ಈತ ಸೈರಸ್ಸಿನ ರಾಜನ ಕೈಯಿಂದ ಮರಣಕ್ಕೆ ಈಡಾದ. ಡೆಲ್ಫಿಯ ದೇವ ವಾಣಿಯಂತೆ ಆತೇನಿಯರು ಕ್ರಿ.ಪೂ. 469ರಲ್ಲಿ ಈತನ ಮೂಳೆಗಳನ್ನು ತಮ್ಮ ದೇಶಕ್ಕೆ ತಂದು ಸಮಾಧಿಮಾಡಿ ಗೌರವಿಸಿದರು. ಜಗದ್ವಿಖ್ಯಾತವಾದ ಪಾರ್ತೀನಾನ್ ಎಂಬ ಗ್ರೀಕರ ಗುಡಿಯಲ್ಲಿ ಕಂಡರಿಸಿರುವ ಈತನ ಜೀವನಚಿತ್ರಗಳನ್ನು ಇಂದಿಗೂ ಕಾಣಬಹುದು.        (ಆರ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ